ಗ್ರೇ, ಥಾಮಸ್
 
1716---1771. ಇಂಗ್ಲೆಂಡಿನ ನಿಯೋಕ್ಲಾಸಿಕಲ್ (ನವಅಭಿಜಾತ) ಕಾವ್ಯಸಂಪ್ರದಾಯದ ಇಳಿಗಾಲದಲ್ಲಿ ಅದೇ ಸಂಪ್ರದಾಯದವರಾದರೂ ತಮ್ಮ ಭಾವುಕತೆ ಹೃದಯವಂತಿಕೆಯ ಮೂಲಕ ರೊಮ್ಯಾಂಟಿಕ್ ಕಾವ್ಯಕ್ಕೆ ದಾರಿ ಮಾಡಿಕೊಟ್ಟ ಕವಿಗಳಲ್ಲಿ ಥಾಮಸ್ ಗ್ರೇನ ಹೆಸರು ಕಾಲಿನ್ಸ್ ಕವಿಯ ಜೊತೆಗೆ ಸೇರ್ಪಡೆಯಾಗಿದೆ. ಈತ ಅಭಿಜಾತ ಸಾಹಿತ್ಯ, ಮಧ್ಯಯುಗೀನ ಇತಿಹಾಸಗಳನ್ನು ಆಳವಾಗಿ ಅಭ್ಯಸಿಸಿದ ಕವಿ. ಇವೆರಡರ ಮೆರಗು ಈತನ ಕಾವ್ಯದಲ್ಲಿದೆ. ಬಂಧದ ಬಿಗುಹು ಕ್ಲಾಸಿಕಲ್ ಸಂಪ್ರದಾಯದ್ದಾದರೂ ಇಂಗ್ಲಿಷ್ ಭಾಷೆಯ ಮಧ್ಯಯುಗೀನ ಕಾಲದ ಬಿರುಸು-ಓಜಸ್ಸು ಈತನ ವಿಚಾರಸರಣಿಯಲ್ಲಿ ಸೇರಿ ಕ್ಲಾಸಿಕಲ್ ಸಂಪ್ರದಾಯಬದ್ಧತೆಯನ್ನು ಮೂದಲಿಸಿತು. ಈತ ಹುಟ್ಟಿದ್ದು ಲಂಡನಿನಲ್ಲಿ, ತಂದೆ ಕೋರ್ಟಿನ ಕರಡು ಬರೆಯುವ ತಜ್ಞ; ಸಾಕಷ್ಟು ಹಣ ಗಳಿಸಿದ್ದ. ತಾಯಿ ಸ್ವತಂತ್ರವಾಗಿ ಹ್ಯಾಟ್ ಮಾಡುವ ಉದ್ಯೋಗ ನಡೆಸುತ್ತಿದ್ದಳು. ಒಡಹುಟ್ಟಿದವರನ್ನು ಚಿಕ್ಕಂದಿನಲ್ಲಿಯೇ ಕಳಕೊಂಡ ಗ್ರೇ ದುಃಖಿ; ಏಕಾಕಿ ಜೀವನಕ್ಕೆ ಮೊದಲಿನಿಂದಲೇ ಹೊಂದಿಕೊಂಡಿದ್ದ. ಸ್ಥಿತಿವಂತನಾಗಿದ್ದುದರಿಂದ ಈತನನ್ನು ಈಟನ್ ವಿದ್ಯಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ಹೊರೆಸ್ ವಾಲ್ ಪೋಲ್ ಲೇಖಕನ ಸಹಕಾರಿಯಾಗಿದ್ದುಕೊಂಡು ಆತನ ದೀರ್ಘಾವಧಿಯ ಗೆಳೆಯನಾದ. ಹದಿನೆಂಟನೆಯ ವಯಸ್ಸಿಗೆ ಕೇಂಬ್ರಿಜ್ ಸೇರಿದನಾದರೂ ಪದವಿ ಪಡೆಯುವುದರಲ್ಲಿ ವಿಫಲನಾದ. ಪುಸ್ತಕ-ಹೂದೋಟಗಳಿಗೇ ಮನಸೋತು ವಿವಿಧ ಜ್ಞಾನದಲ್ಲಿ ಮನಸ್ಸನ್ನು ಹರಿಸಿದ. ವಾಲ್‍ಪೋಲ್‍ನ ಜೊತೆಗೆ ಯೂರೋಪಿನ ಪ್ರಯಾಣಕ್ಕೆ ಹೋದಾಗ ವಿರಸ ಮೂಡಿ ಇವರ ಸ್ನೇಹಸಂಬಂಧ ಮೂರು ನಾಲ್ಕು ವರ್ಷ ಮುರಿದರೂ ಮತ್ತೆ ಹೊಂದಿಕೆಯಾಯಿತು. ಅನಂತರ ಕೇಂಬ್ರಿಜ್‍ನಲ್ಲಿ ನೆಲೆಸಿ ಗ್ರಂಥಾಲಯ, ತೋಟಗಳಲ್ಲಿ ಸುಖವಾಗಿ ಕಾಲ ಕಳೆದ. 1768ರಲ್ಲಿ ಆಧುನಿಕ ಇತಿಹಾಸದ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರೂ ಪಾಠ ಹೇಳಿಕೊಡುವ ಗೋಜಿಗೇ ಹೋಗಲಿಲ್ಲ. ಸದಾ ಶಾಂತ-ಅಂತರ್ಮುಖಿ ಜಿವನ ನಡೆಸಿದ. 1742ರಲ್ಲಿ ಪ್ರಥಮ ಇಂಗ್ಲಿಷ್ ಕವನ (ವಸಂತ ಸ್ತೋತ್ರ) ರಚಿಸಿದ. ಲ್ಯಾಟಿನ್ ಭಾಷೆಯಲ್ಲಿ ರಚಿಸಿದ ಈತನ ಚಿಂತನಪರ ಕವನಗಳುಂಟು. ಭಾವುಕ ಚಿಂತನಪರತೆಯ ಪರಾಕಾಷ್ಠೆಯನ್ನು ಎನ್ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್ ಯಾರ್ಡ್ ಎಂಬ ಕವನದಲ್ಲಿ (ಹಳ್ಳಿಯ ಮಸಣದಲ್ಲಿ ಕುಳಿತು ರಚಿಸಿದ ಶೋಕಗೀತ) ಕಾಣುತ್ತೇವೆ. ಈ ಕವನವು ಇಂಗ್ಲೆಂಡ್-ಅಮೆರಿಕಗಳ ಭಾವುಕರ ಪಠ್ಯವಾಯಿತು. ಗತಕಾಲದ ಚಿಂತನೆಯಿಂದ ಕೂಡಿದ ಹಿಮ್ ಟು ಅಡ್‍ವರ್ಸಿಟಿ, ಓಡ್ ಆನ್ ಎ ಡಿಸ್ಟೆಂಟ್ ಪ್ರಾಸ್ಪೆಕ್ಟ್ ಆಫ್ ಈಟನ್ ಕಾಲೇಜ್ ಇವು ಈತನ ನೆನೆ-ಕನಸುಗಳ ಶ್ರೇಷ್ಠ ಉದಾಹರಣೆಗಳು. ಕವಿಯ ದಿ ಬಾರ್ಡ್ ಎಂಬ ಕವನದಲ್ಲಿ ಚಾರಿತ್ರಿಕ ದರ್ಶನವಿದೆ.
 
ಈತನಲ್ಲಿ ಹಾಸ್ಯಗುಣವೂ ಇತ್ತು. ಪತ್ರ ಸಾಹಿತ್ಯ ಸೃಷ್ಟಿಯಲ್ಲೂ ಈತ ಹೆಸರಾದವ. 			(ಎಸ್.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ